ಕ್ರಿಶ್ಚನ್ ಸೈನ್ಸ್ ಮಾನಿಟರಿ

ಕ್ರಿಶ್ಚನ್ ಸೈನ್ಸ್ ಸಂಸ್ಥೆಯ ಸ್ಥಾಪಕಳಾದ ಶ್ರೀಮತಿ ಮೇರಿ ಬೇಕರ್ ಎಡ್ಡಿ 1908ರಲ್ಲಿ ಬಾಸ್ಟನ್ ನಗರದಲ್ಲಿ ಸ್ಥಾಪಿಸಿದ ಇಂಗ್ಲಿಷ್ ದಿನಪತ್ರಿಕೆ. ಮೊದಲನೆಯ ಪುಟದಲ್ಲಿ ಜಾಹೀರಾತುಗಳನ್ನೂ ಕೊನೆಯ ಪುಟದಲ್ಲಿ ಸಂಪಾದಕೀಯ ಲೇಖನಗಳನ್ನೂ ಮುದ್ರಿಸುತ್ತಿದ್ದ ಮಾನಿಟರ್ ಪತ್ರಿಕೆ ಬಾಸ್ಟನಿನ ಇತರ ಪತ್ರಿಕೆಗಳಿಗೆ ಸಾಟಿಯಾಗಿ ಸ್ಪರ್ಧಿಸಲಾರಂಭಿಸಿತು. ಇದರಲ್ಲಿ ಪ್ರಕಟವಾಗುತ್ತಿದ್ದ ವಿದೇಶಿ ಬಾತ್ಮಿಗಳೂ ವಿಶೇಷ ಲೇಖನಗಳೂ ಕಲೆ, ಸಂಗೀತ ಮತ್ತು ಸಾಹಿತ್ಯ ವಿಷಯಗಳನ್ನು ಕುರಿತ ಲೇಖನಗಳೂ ಮೊದಲಿನಿಂದಲೂ ಶ್ರೇಷ್ಠದರ್ಜೆಯವೆಂದು ಪರಿಗಣಿತವಾಗಿದ್ದುವು. ಭಾವೋದ್ರೇಕಕರವಾದ, ನಿಂದಾತ್ಮಕವಾದ ಮತ್ತು ಅಪರಾಧಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸಿ ಓದುಗರ ಮನಸ್ಸು ಕ್ಷೋಭೆಗೆ ಒಳಗಾಗುವಂತೆ ಮಾಡಬಾರದೆಂಬ ನೀತಿಯನ್ನು ಅನುಸರಿಸಿಕೊಂಡು ಬರಬೇಕೆಂದು ಎಡ್ಡಿ ಬೇಕರ್ ಕಟ್ಟಪ್ಪಣೆ ಮಾಡಿದ್ದಳು. ಈ ತೆರನಾದ ಸುದ್ದಿಗಳನ್ನು ಪ್ರಕಟಿಸುವುದರಿಂದ ಸಾಮಾಜಿಕ ಜೀವನದ ಆರೋಗ್ಯ ಕೆಡುವುದೆಂಬುದು ಈ ಪತ್ರಿಕೆಯ ಸ್ಥಾಪನೆಗೆ ಕಾರಣವಾದ ಕ್ರಿಶ್ಚನ್ ಸೈನ್ಸ್ ಚರ್ಚಿನ ಭಾವನೆಯಾಗಿತ್ತು. ಆದರೆ ಅಂಥ ಸುದ್ದಿಗಳು ಸರ್ಕಾರದ ಅಸ್ತಿತ್ವಕ್ಕೆ ಅಥವಾ ಸಮಾಜಕ್ಕೆ ಧಕ್ಕೆ ತರುವಂತಿದ್ದರೆ ಅವನ್ನು ಪತ್ರಿಕೆ ಪ್ರಕಟಿಸಿ, ಸರ್ಕಾರ ಮತ್ತು ಸಮಾಜ ಸರಿಯಾದ ಮಾರ್ಗದಲ್ಲಿ ಸಾಗಲು ಸಹಾಯ ಮಾಡುತ್ತಿತ್ತು. ಅಂಥ ಪ್ರಕಟಣೆಗಳಲ್ಲೂ ಉದ್ರೇಕಕ್ಕಾಗಲಿ ಅತಿರಂಜನೆಗಾಗಲಿ ಎಡೆಕೊಡುತ್ತಿರಲಿಲ್ಲ.

	ಆದರೆ ಪತ್ರಿಕೆ ಕೇವಲ ಮತಸಂಬಂಧ ಸುದ್ಧಿಗಳಿಗೆ ಮೀಸಲಾದ ಧಾರ್ಮಿಕ ಪತ್ರಿಕೆಯಾಗಿರಲಿಲ್ಲ. ಮಾನಿಟರ್ ಪತ್ರಿಕೆ ಹುಟ್ಟಿದ್ದೇ ಪೀತಪತ್ರಿಕೋದ್ಯಮವನ್ನು ಪ್ರತಿಭಟಿಸುವುದಕ್ಕಾಗಿ. 1910ರ ಪ್ರಾರಂಭದಿಂದ ಕ್ರಿಶ್ಚನ್ ಸೈನ್ಸ್ ಚರ್ಚ್ ಸಂಸ್ಥೆ ಅನೇಕ ಪ್ರಚಾರಸಭೆಗಳನ್ನು ಏರ್ಪಡಿಸಿ ಶುದ್ಧ ಮತ್ತು ತಿಳಿಯಾದ ಪತ್ರಿಕೋದ್ಯಮ ತತ್ತ್ವಗಳನ್ನು ಜನರಿಗೆ ತಿಳಿಸಿತು. ತನ್ಮೂಲಕ ಮಾನಿಟರ್‍ಗೂ ಪ್ರಚಾರ ಲಭ್ಯವಾಯಿತು.

	ಪತ್ರಿಕೆ ಪ್ರಾರಂಭವಾದ ಹತ್ತು ವರ್ಷಗಳ ಅವಧಿಯಲ್ಲಿ ಕ್ರಿಶ್ಚನ್ ಸೈನ್ಸ್ ಚರ್ಚಿನ ಪ್ರಯತ್ನದ ಫಲವಾಗಿಯೂ ಅದು ಶ್ರೇಷ್ಠದರ್ಜೆಯ ಲೇಖನಗಳನ್ನು ಮತ್ತು ಉತ್ತಮ ರೀತಿಯ ವರದಿ ಮತ್ತು ಸುದ್ದಿಗಳನ್ನು ಪ್ರಕಟಿಸುತ್ತಿದ್ದುದರಿಂದಲೂ ಪತ್ರಿಕೆಯ ಪ್ರಸಾರ 1,20,000 ಪ್ರತಿಗಳನ್ನು ಮುಟ್ಟಿತ್ತು. ಇತರ ದಿನಪತ್ರಿಕೆಗಳಿಗಿಂತ ಈ ಪತ್ರಿಕೆ ಅಮೆರಿಕದ ಎಲ್ಲ ಭಾಗಗಳಲ್ಲೂ ಪ್ರಸಾರವಾಗಿತ್ತು. ವಿದೇಶಗಳಲ್ಲೂ ಈ ಪತ್ರಿಕೆಯ ಪ್ರಸಾರ ತಕ್ಕಮಟ್ಟಿಗಿತ್ತು. ಇದಕ್ಕೆ ಕಾರಣ ಪತ್ರಿಕೆಯ ಉತ್ತಮ ದರ್ಜೆಯ ವಿದೇಶಿ ಬಾತ್ಮಿಗಳು.

	ಬ್ರಿಟನಿನಲ್ಲಿ ತರಬೇತು ಹೊಂದಿದ ಫ್ರೆಡರಿಕ್ ಡಿಕ್ಸನ್ ಒಂದನೆಯ ಮಹಾಯುದ್ಧದ ಕಾಲದಲ್ಲಿ ಇದರ ಸಂಪಾದಕನಾಗಿದ್ದ. ಯುದ್ಧನೀತಿಗೂ ಕ್ರಿಶ್ಚನ್ ಸೈನ್ಸ್ ಚರ್ಚ್ ಧ್ಯೇಯಕ್ಕೂ ವಿರೋಧ ಬಂದುದರಿಂದ ಡಿಕ್ಸನ್ ಆ ಕೆಲಸ ಬಿಡಬೇಕಾಯಿತು. ಆ ಕಾಲಕ್ಕೆ ಪತ್ರಿಕೆಯ ಪ್ರಸಾರ, ಜಾಹೀರಾತು ಮತ್ತು ಪ್ರಭಾವಗಳು ಕಡಿಮೆಯಾಗಿದ್ದುವು.

	ಹಸ್ರ್ಟ್ ಪತ್ರಿಕಾಗುಂಪಿನಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದ ವಿಲಿಸ್ ಜೆ. ಆಬಟ್ 1918ರಲ್ಲಿ ಇದರ ಸಂಪಾದಕನಾಗಿ ಪತ್ರಿಕೆಯ ಅಭಿವೃದ್ಧಿಗೆ ಕಾರಣನಾದ. ಆಬಟ್ ಅಧಿಕಾರ ವಹಿಸಿಕೊಂಡ ಐದು ವರ್ಷಗಳಲ್ಲಿ ಪತ್ರಿಕೆಯ ಪ್ರಸಾರ ಹೆಚ್ಚಾಯಿತು; ಕೀರ್ತಿ ಬೆಳೆಯಿತು. ಅಮೆರಿಕದ ಮುಖ್ಯನಗರಗಳಲ್ಲೂ ವಿದೇಶಗಳ ರಾಜಧಾನಿಗಳಲ್ಲೂ ಪತ್ರಿಕೆಯ ಕಚೇರಿಗಳು ಸ್ಥಾಪಿತವಾದುವು. 1927ರಿಂದ ಸಂಪಾದಕೀಯ ಮಂಡಳಿಯೊಂದು ಪತ್ರಿಕೆಯನ್ನು ನಡೆಸುವ ಭಾರ ಹೊತ್ತಿತು. ಎರ್ವಿನ್ ಡಿ. ಕ್ಯಾನನ್ 1940 ರಿಂದ 1964ರವರೆಗೆ ಇದರ ವ್ಯವಸ್ಥಾಪಕ ಸಂಪಾದಕರಾದರು. ಇವರ ನೇತೃತ್ವದಲ್ಲಿ ಮಾನಿಟರ್ ಪತ್ರಿಕೆ ದೊಡ್ಡದಾಗಿ ಬೆಳೆಯಿತು; ಅಮೆರಿಕದಲ್ಲಿ ಐದು ಕಡೆ ಪ್ರಕಟವಾಗತೊಡಗಿತು. ಅದರ ಒಂದು ವಿದೇಶಿ ಪ್ರಕಟಣೆಯೂ ಪ್ರಾರಂಭವಾಯಿತು. ಜಗತ್ತಿನ 120 ದೇಶಗಳಲ್ಲಿ ಪತ್ರಿಕೆಗೆ ಚಂದಾದಾರರಾದರು. ಶುದ್ದ ಪತ್ರಿಕೋದ್ಯಮದ ನೀತಿ ನಿಯಮಗಳನ್ನನುಸರಿಸಿ ಜನಪ್ರಿಯತೆ ಗಳಿಸಿದ ವಾರದಲ್ಲಿ 3 ದಿನ ಪ್ರಕಟವಾಗುವ ಕೆಲವೇ ಅಮೆರಿಕನ್ ದಿನಪತ್ರಿಕೆಗಳಲ್ಲಿ ಕ್ರಿಶ್ಚನ್ ಸೈನ್ಸ್ ಮಾನಿಟರ್ ಒಂದು. 1988ರಲ್ಲಿ ಇಂಗ್ಲಿಷ್‍ನಲ್ಲಿ ವಾರಪತ್ರಿಕೆ ರೂಪದಲ್ಲಿ ಪ್ರಕಟವಾಯಿತು. `ವಲ್ರ್ಡ್ ಮಾನಿಟರ್ ಮಾಸಪತ್ರಿಕೆ ಇದರ ಸಹ ಪ್ರಕಟಣೆ.												
(ಎನ್.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ